ನಾಂಗರ್‍ಹಾರ್ -
	ಆಫ್ಘಾನಿಸ್ತಾನದ ಪೂರ್ವ ಭಾಗದಲ್ಲಿರುವ ಒಂದು ಪ್ರಾಂತ್ಯ. ಉತ್ತರದಲ್ಲಿ ಲಾಗ್‍ಮಾನ್ ಮತ್ತು ಕನಾರ, ಪಶ್ಚಿಮದಲ್ಲಿ ಕಪೀಸ, ಕಾಬೂಲ್ ಮತ್ತು ಲೋಗರ್ ಮತ್ತು ದಕ್ಷಿಣದಲ್ಲಿ ಪಾಕ್ಟೀಯಾ ಪ್ರಾಂತ್ಯಗಳೂ ಪೂರ್ವದಲ್ಲಿ ಪಾಕಿಸ್ತಾನವೂ ಇವೆ. ವಿಸ್ತೀರ್ಣ 7,176 ಚ.ಕಿ.ಮೀ. ಜನಸಂಖ್ಯೆ ಸುಮಾರು 8,17,905 (1970 ಅಣ). ಆಡಳಿತ ಕೇಂದ್ರ ಜಲಾಲಬಾದ್.

	ನಾಂಗರ್‍ಹಾರ್‍ನ ಭೌತಿಕ ಲಕ್ಷಣ ವೈವಿಧ್ಯಮಯವಾದ್ದು. ಇದು ಭಾಗಶಃ ಕಾಬೂಲ್ ನದೀ ಕಣಿವೆಯಲ್ಲಿದೆ. ಪೂರ್ವದಲ್ಲಿ ಖೈಬರ್ ಕಣಿವೆಯಿದೆ. ಉತ್ತರದಲ್ಲಿ ಹಿಂದೂಕುಷ್ ಪರ್ವತವಿದೆ. ಪ್ರಾಂತ್ಯದ ಉತ್ತರ ಭಾಗ ಪರ್ವತಮಯ. ಈ ಪರ್ವತಗಳ ನಡುವೆ ಹಸಿರು ಕಾಡುಗಳಿವೆ. ಈ ಭಾಗಕ್ಕೆ ನುರಿಸ್ಥಾನ ಎಂಬ ಹೆಸರೂ ಇದೆ. ದಕ್ಷಿಣದ ಕಡೆಗೆ ಭೂಮಿ ಇಳಿಜಾರಾಗಿದೆ. ಉತ್ತರ ಮತ್ತು ಪಶ್ಚಿಮದಿಂದ ಹರಿಯುವ ನದಿಗಳು ಈ ಕಣಿವೆಗಳನ್ನು ಫಲವತ್ತು ಮಾಡಿವೆ. ಆಫ್ಘಾನಿಸ್ತಾನದ ದೊಡ್ಡ ನದಿಗಳಲ್ಲೊಂದಾದ ಕಾಬೂಲ್ ನದಿ ಈ ಪ್ರಾಂತ್ಯದ ಮೂಲಕ ಪೂರ್ವಾಭಿಮುಖವಾಗಿ ಹರಿಯುತ್ತದೆ. ಕಾಬೂಲ್ ನದಿಗೆ ಅಲಿಂಘರ್, ಅಲಿಷಾಂಗ್ ಮತ್ತು ಕುನಾರ್ ಪ್ರಮುಖ ಉಪನದಿಗಳು. ಕುನಾರ್ ಮತ್ತು ಕಾಬೂಲ್ ನದಿಗಳು ಸೇರುವ ಎಡೆಯಲ್ಲಿ ಜಲಾಲಬಾದ್ ಪಟ್ಟಣವಿದೆ.

	ಈ ಪ್ರಾಂತ್ಯದ ವಾಯುಗುಣ ಮೇಲ್ಮೈಲಕ್ಷಣಕ್ಕನುಗುಣವಾಗಿ ಭಿನ್ನವಾಗುತ್ತದೆ. ಬೇಸಗೆಯಲ್ಲಿ ಉತ್ತರ ಭಾಗದಲ್ಲಿ ತಂಪಾದ ಮತ್ತು ಹಿತಕರವಾದ ಆಲ್ಪೈನ್ ವಾಯುಗುಣ ಇರುತ್ತದೆ. ದಕ್ಷಿಣದಲ್ಲಿ ಹೆಚ್ಚು ಸೆಕೆ. ಅಲ್ಲಿಯ ವಾತಾವರಣ ಹೆಚ್ಚು ಶುಷ್ಕ. ಚಳಿಗಾಲದಲ್ಲಿ ಉತ್ತರದ ಪರ್ವತಗಳನ್ನು ಮಂಜು ಕವಿದಿರುತ್ತದೆ. ಆಗ ದಕ್ಷಿಣದ ವಾಯುಗುಣ ಹಿತಕರವಾಗಿರುತ್ತದೆ.

	ಲಾಗ್‍ಮನ್, ಕಾಬೂಲ್ ಮತ್ತು ಕುನಾರ್ ಕಣಿವೆ ಪ್ರದೇಶಗಳು ವ್ಯವಸಾಯಕ್ಕೆ ಯೋಗ್ಯವಾಗಿವೆ. ಗೋಧಿ, ಬತ್ತ, ಚಹ, ಕಬ್ಬು, ದ್ರಾಕ್ಷಿ, ಬಾಳೆ, ಅಂಜೂರ, ಬೆಳೆಯುತ್ತವೆ. ಕುರಿ, ದನ, ಕುದುರೆ ಮುಖ್ಯ ಸಾಕುಪ್ರಾಣಿಗಳು. ಕುರಿಯ ಚರ್ಮದ ಅಂಗಿ ಮತ್ತು ಕಂಬಳಿಯನ್ನು ತಯಾರಿಸುವುದು ಜನರ ಮುಖ್ಯ ಕಸುಬು. ಇಲ್ಲಿಯ ಕುಸರಿ ಮತ್ತು ಹೆಣಿಗೆ ಕೆಲಸದ ವಸ್ತುಗಳು ಪ್ರಸಿದ್ಧವಾಗಿವೆ. ಇಲ್ಲಿ ವೈಡೂರ್ಯ ದೊರಕುತ್ತದೆ. ಉತ್ತರದಲ್ಲಿ ಸೋವಿಯತ್ ರಷ್ಯ ಮತ್ತು ಪೂರ್ವದಲ್ಲಿ ಪಾಕಿಸ್ತಾನದೊಂದಿಗೆ ಸಂಪರ್ಕ ಸಾಧಿಸುವ ಹೆದ್ದಾರಿ ನಿರ್ಮಾಣವಾಗಿದೆ. ಜಲಾಲಬಾದ್ ಬಿಟ್ಟರೆ ಈ ಪ್ರಾಂತ್ಯದಲ್ಲಿ ದೊಡ್ಡ ಪಟ್ಟಣಗಳಿಲ್ಲ.

	ಈ ಪ್ರಾಂತ್ಯದಲ್ಲಿ ಪ್ರಾಚೀನ ಕಾಲದಿಂದಲೂ ವಿವಿಧ ಬುಡಕಟ್ಟುಗಳ ಜನರು ವಾಸಿಸುತ್ತಿದ್ದಾರೆ. ಅಲೆಗ್ಸಾಂಡರ್‍ನಿಂದ ಹಿಡಿದು ಪರ್ಷಿಯನ್ನರು, ಕುಶಾನರು, ಹೂಣರು, ಮಂಗೋಲರು, ಬ್ರಿಟಿಷರು ಮೊದಲಾದ ಆಕ್ರಮಣಕಾರರೆಲ್ಲ ಈ ಜನರೊಂದಿಗೆ ಹೋರಾಡಿದ್ದಾರೆ. ಈ ಪ್ರಾಂತ್ಯ ಭಾರತದ ಮೌರ್ಯ ಸಾಮ್ರಾಜ್ಯದ ಭಾಗವಾಗಿತ್ತು. ಮೊಗಲರ ಕಾಲದಲ್ಲಿ ದೆಹಲಿಗೆ ಅಧೀನವಾಗಿತ್ತು. ಖೈಬರ್ ಕಣಿವೆ ಪ್ರದೇಶದಲ್ಲಿ ಅನೇಕ ಯುದ್ಧಗಳು ನಡೆದಿವೆ. ಹತ್ತೊಂಬತ್ತನೆಯ ಶತಮಾನದ ಹೊತ್ತಿಗೆ ಇಲ್ಲಿಯ ಜನರು ಇಸ್ಲಾಮ್‍ಗೆ ಮತಾಂತರಗೊಂಡರು.						
		(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ